Friday, May 22, 2009

ಆಟ - ಬಿ ಆರ್ ಲಕ್ಷ್ಮಣರಾವ್

ಆಟ...... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.

-----------------------------------------------------
ಬಣ್ಣಿಸಲೇ, ಹೆಣ್ಣೇ ?
ಏನು ಬಣ್ಣಿಸಲೇ, ಹೆಣ್ಣೇ,
ನಿನ್ನ ಮಹಿಮೆಯನು ?
ಏನೆಂದು ಬಣ್ಣೆಸಲಿ ?

ಗೋಲು ಹೊಡೆದಂತೆ ಮರಡೋನ
ತಪ್ಪಿಸಿ ಎಲ್ಲರನು
ಮಿಂಚು ನೋಟದಲ್ಲೆ
ನನ್ನೆದೆಯ ಹೊಕ್ಕೆಯಲ್ಲೆ!
ಕಪಿಲನ ಸಿಕ್ಸರಿನಂತೆ
ನಮ್ಮ ಪ್ರೇಮ ಕೂಡ
ದಾಟಿ ಹಾರಿತಲ್ಲೆ
ಈ ಜಗದ ಎಲ್ಲ ಎಲ್ಲೆ!

ಸೋತಳು ನಿನಗೆ ಪಿ.ಟಿ.ಉಷಾ
ಅಡೆ ತಡೆಗಳ ದಾಟಿ
ಓಡವ ವೇಗದಲಿ
ನನ್ನ ಕೂಡುವ ತವಕದಲಿ!
ಮೀರಿದೆ ನಾನು ಗವಾಸ್ಕರನ
ನೂರುಗಳ ದಾಖಲೆ
ನಿನಗಿತ್ತ ಮುತ್ತಿನಲ್ಲಿ
ಪಡೆದ ಸಿರಿ ಸಂಪತ್ತಿನಲಿ

ಎಲ್ಲ ಆಟಗಳೂ ತೀರಿದವು
ಈಗ ಕಣ್ಣಾಮುಚ್ಚಾಲೆ
ಎಲ್ಲಡಗಿದೆ, ನಲ್ಲೆ ?
ಇನ್ಯಾರ ತೆಕ್ಕೆಯಲ್ಲೆ ?
ಉಳಿಸಿ ಹೋದೆಯಾ ನನಗೆ
ಮುಗಿಯದ ಹುಡುಕಾಟ!
ಒಲವೇ, ನೀನೆಲ್ಲಿ ?
ಇನ್ಯಾರ ಹೆಣ್ಣಿನಲ್ಲಿ?

- ಬಿ ಆರ್ ಲಕ್ಷ್ಮಣರಾವ್.